ಬ್ಯಾಥಿಗೋಳ
	ಕಡಲಿನೊಳಗಿನ ಜೀವಿಗಳ ವೀಕ್ಷಣೆಗೆ ಉಪಯುಕ್ತವಾದ ಮತ್ತು ಇಬ್ಬರು ಉಳಕೊಳ್ಳಬಹುದಾದ ಸಾಧನ ಬ್ಯಾಥಿಸ್ಫಿಯರ್. ಇದು ಆಳಕ್ಕೆ ಇಳಿಯಬಲ್ಲ ಗೋಳ. (ಗ್ರೀಕ್ ಭಾಷೆಯಲ್ಲಿ ಬೇತಾಸ್ ಎಂದರೆ ಆಳ.) ಸಮುದ್ರದ ಆಳದಲ್ಲಿ ಕೆಲಸಮಾಡುವಾಗ ಕೆಲವು ತೊಂದರೆಗಳು ಎದುರಾಗುತ್ತವೆ. ಮೊದಲನೆಯದಾಗಿ, ಪ್ರತಿ ಮೀಟರ್ ಆಳ ಹೆಚ್ಚಿದಂತೆ ಚದರ ಸೆಂಟಿಮೀಟರಿಗೆ 103.5 ಗ್ರಾಮ್ ತೂಕದಷ್ಟು ಸಂಮರ್ದ ಹೆಚ್ಚುತ್ತದೆ. ಎರಡನೆಯದಾಗಿ, ಉಸಿರಾಟಕ್ಕೆ ಬೇಕಾದ ವಾಯು ಸಮುದ್ರ ಗರ್ಭದಲ್ಲಿ ಅಲಭ್ಯ. ಮೂರನೆಯದಾಗಿ, ಸುಮಾರು 100 ಮೀಟರಿಗಿಂತ ಆಳಕ್ಕೆ ಸೂರ್ಯಪ್ರಕಾಶ ತೂರಿ ಹೋಗದ್ದರಿಂದ ಅತಿ ಆಳದಲ್ಲಿ ಕತ್ತಲಿರುತ್ತದೆ. ಈ ಕಾರಣಗಳಿಂದ ಅಲ್ಲಿ ಭೂಮಿಯ ಮೇಲೆ ನಡೆಸುವಷ್ಟು ಸುಲಭವಾಗಿ ವೀಕ್ಷಣೆ ನಡೆಸುವಂತಿಲ್ಲ. ಮಾತ್ರವಲ್ಲ, ನೆಲದ ಮೇಲೆ ಚಲಿಸುವಷ್ಟು ಸಲೀಸಾಗಿ ಸಮುದ್ರದೊಳಗೆ ಚಲಿಸಲು ಸಾಧ್ಯವಿಲ್ಲ.

	ಹಿಂದೆ ಪರಿಣತ ಮುಳುಗುಗಾರರು ತೀರದ ಸನಿಹದಲ್ಲೆ ಸಮುದ್ರ ತಳಕ್ಕೆ ಇಳಿದು ಸ್ವಲ್ಪ ಹೊತ್ತು ಅನ್ವೇಷಣೆ ನಡೆಸಿ ಮೇಲೆ ಬರುತ್ತಿದ್ದರು. ಮೊದಲಿಗೆ ಸಮುದ್ರ ತಳದ ಪರಿಶೋಧನೆಗೆ ಇದ್ದುದು ಈ ಮಾರ್ಗ ಮಾತ್ರ. ಮುಳುಗು ತೊಡುಗೆ (ಡೈಡಿಂಗ್ ಸೂಟ್), ಮುಳುಗು ಘಂಟೆಗಳ (ಡೈವಿಂಗ್ ಬೆಲ್) ವಿನ್ಯಾಸದಿಂದ ಮುಳುಗುಗಾರರು ಇನ್ನಷ್ಟು ಆಳಕ್ಕೆ ಇಳಿಯುವಂತಾಯಿತು. ಆದರೆ ಬ್ಯಾಥಿಗೋಳದ ಸಹಾಯದಿಂದ ಇನ್ನೂ ಹೆಚ್ಚು ಆಳಕ್ಕೆ ಇಳಿದು ಸಂಶೋಧನೆ ನಡೆಸಲು ಸಾಧ್ಯವಾಗಿದೆ.

	ಇದನ್ನು ವಿನ್ಯಾಸಿಸಿದವ ಅಮೆರಿಕದ ಓಲಿಸ್ ಬಾರ್ಟನ್. ಉಕ್ಕನ್ನು ಎರಕ ಹೊಯ್ದು ತಯಾರಿಸಿದ ಸುಮಾರು 2270 ಕೆಜಿ ತೂಕದ. 1.5 ಮೀಟರ್ ವ್ಯಾಸದ ಈ ಗೋಳ ಸಮುದ್ರಗರ್ಭದಲ್ಲಿಯ ಸಂಮರ್ದವನ್ನು ತಾಳಬಲ್ಲದು. ಕಡಲಜೀವಿಗಳ ವಿಕ್ಷಣೆಗಾಗಿ ಇದರಲ್ಲಿ ದಪ್ಪನೆಯ ಕ್ವಾಟ್ರ್ಜ್ ಗಾಜಿನ ಮೂರು ವೃತ್ತಾಕಾರದ ಕಿಂಡಿಗಳಿವೆ. ಉಕ್ಕಿನ ಗೋಳ ವಾಯು, ಜಲಗಳಿಗೆ ಅಭೇದ್ಯ. ನೀರಾವಿಯನ್ನು ಹೀರಲು ಗೋಳದೊಳಗೆ ರಾಸಾಯನಿಕಗಳಿವೆ. ಉಕ್ಕಿನ ಬ್ಯಾಟರಿಗಳಲ್ಲಿ ಸಂಘನಿತ ವಾಯು ಉಂಟು. ಸಮುದ್ರದ ಮೇಲ್ಮೈಯಲ್ಲಿರುವ ಹಡಗಿನಿಂದ ಬ್ಯಾಥಿಗೋಳಕ್ಕೆ ಆಕ್ಸಿಜನ್ ಪೂರೈಕೆಯ ವ್ಯವಸ್ಥೆ ಇದೆ. ಕತ್ತಲೆಯಲ್ಲಿ ಅನ್ವೇಷಣೆ ನಡೆಸಲು ಪ್ರಬಲ ಶೋಧನದಿಂದ (ಸರ್ಚ್‍ಲೈಟ್) ಉಂಟು. ಬ್ಯಾಥಿಗೋಳ ಮತ್ತು ಮಾತೃನೌಕೆ ನಡುವೆ ದೂರವಾಣಿ ಸಂಪರ್ಕ ಇರುವುದು. ಸುಮಾರು 4 ಸೆಂಮೀ ದಪ್ಪದ ಹೊರಜಿಯಿಂದ ಬ್ಯಾಥಿಗೋಳವನ್ನು ಮೇಲಕ್ಕೆ, ಕೆಳಕ್ಕೆ ಚಲಿಸುವುದು ಸಾಧ್ಯ. ಆದರೆ ಹೆಚ್ಚಿನ ಸಮತಲಚಲನೆ ಮಾತ್ರ ಸಾಧ್ಯವಿಲ್ಲ.

	ಸಾಗರಜೀವಿಗಳನ್ನು ವೀಕ್ಷಿಸಿ ಫೋಟೊ ತೆಗೆಯಲು ಅಮೆರಿಕದ ಪ್ರಾಣಿವಿಜ್ಞಾನಿ ವಿಲಿಯಮ್ ಬೇಬ್ ಮತ್ತು ಓಟಿಸ್ ಬಾರ್ಟನ್ 1934ರಲ್ಲಿ ಬ್ಯಾಥಿಗೋಳವನ್ನು ಬಳಸಿ ಅಟ್ಲಾಂಟಿಕ್ ಸಾಗರದ ಬರ್ಮುಡ ಪ್ರದೇಶದಲ್ಲಿ 922.8 ಮೀಟರ್ ಆಳಕ್ಕೆ ಇಳಿದು ವೀಕ್ಷಣೆ ನಡೆಸಿದರು. ಇದೇ ತರದ, ಆದರೆ ಇನ್ನೂ ಹೆಚ್ಚಿನ ಸಂಮರ್ದವನ್ನು ತಾಳಬಲ್ಲ ಸಾಧನದಲ್ಲಿ ಓಟಿಸ್ ಬಾರ್ಟನ್ ಕ್ಯಾಲಿಫೋರ್ನಿಯ ತೀರದಿಂದಾಚೆ 1372 ಮೀಟರ್ ಆಳಕ್ಕೆ ಇಳಿದು ಪರಿಶೋಧನೆ ನಡೆಸಿದ. ಈ ಸಾಧನಕ್ಕೆ ಬೆಂತೊಸ್ಕೋಪ್ ಎಂದು ಹೆಸರು.

	ಪಾಶ್ರ್ವ ಕಿಂಡಿಗಳಿರುವ (ಪೋರ್ಟ್ ಹೋಲ್ಸ್) ಬ್ಯಾಥಿಸ್ಕೇಫ್ (ಆಳ ಹಡಗು) ಎಂಬ ಸಾಧನ ಇನ್ನೂ ಆಳದಲ್ಲಿ ವೀಕ್ಷಣೆ ನಡೆಸಲು ಸಹಾಯಕವಾಯಿತು. ಸ್ವಿಟ್‍ಜûರ್‍ಲೆಂಡಿನ ವಿಜ್ಞಾನಿ ಆಗಸ್ಟ್ ಪಿಕಾರ್ಡ್ 3962 ಮೀಟರ್ ಆಳದಲ್ಲಿ, ಚದರ ಸೆಂಮೀಗೆ 399.8 ಕೆಜಿ ಸಂಮರ್ದ ತಾಳಬಲ್ಲ ಉಕ್ಕಿನ ಕೋಶ ರಚಿಸಿದ. ಇದರ ಭಾರವನ್ನು ಸಮತೋಲಗೊಳಿಸಲು ಸುಮಾರು 31,800 ಲೀಟರ್ ಪೆಟ್ರೋಲ್ ಬಳಸಿದ. ಸಮುದ್ರತಳದಲ್ಲಿ ಪ್ರೊಜೆಕ್ಟರ್ ದೃಢವಾಗಿ ನಿಲ್ಲಲು ಸಹಾಯಕವಾದ ಹಗ್ಗ (ಗೈಡ್ ರೋಪ್), ಮತ್ತು ತಿರುಗಣಿಗಳನ್ನು ಅದರ ಎಂಜಿನ್ನಿಗೆ ಅಳವಡಿಸಲಾಗಿತ್ತು. ಯಾವ ಪ್ರಯಾಣಿಕನನ್ನೂ ಒಳಗೊಳ್ಳದ ಇಂಥ ಬ್ಯಾಥಿಸ್ಕೇಫ್ 1948ರಲ್ಲಿ 1158 ಮೀಟರ್ ಆಳಕ್ಕೆ ಇಳಿಯಲು ಶಕ್ತವಾಯಿತು, 1953ರ ವೇಳೆಗೆ ಪಿಕಾರ್ಡ್ ಬ್ಯಾಥಿಸ್ಕೇಫನ್ನು ಬಳಸಿ 3048 ಮೀಟರ್ ಆಳಕ್ಕೆ ಇಳಿಯಲು ಸಮರ್ಥನಾದ. ಮುಂದೆ ಹಡಗಿಗೆ ಲಗತ್ತಿಸಿದ ಹೊರಜಿಯ ಸಹಾಯವಿಲ್ಲದೆ ತಾನಾಗಿ ಚಲಿಸಬಲ್ಲ ಬ್ಯಾಥಿಸ್ಕೇಫ್ ರಚಿತವಾಯಿತು. ಪೆಟ್ರೋಲನ್ನು ಮೇಲ್ಬದಿಗೆ ಸಾಗಿಸಿ ಕೆಳಭಾಗವನ್ನು ನೀರಿನಿಂದ ತುಂಬಿಸಿ ಕೆಳ ಇಳಿಯುವುದಕ್ಕೂ ಸೀಸದ ಗಟ್ಟಿಗಳನ್ನು ಹೊರತೆಗೆದು ಭಾರ ಕಡಿಮೆಮಾಡಿ ಮೇಲೇರುವುದಕ್ಕೂ ಸೌಲಭ್ಯ ಒದಗಿಸಿಕೊಂಡರು ಬ್ಯಾಥಿಸ್ಕೇಫಿನ ಒಂದೊಂದು ಬದಿಯಲ್ಲಿ ಒಂದೊಂದು ನೋದಕ (ಪ್ರೊಪೆಲರ್) ಇದ್ದುದರಿಂದ ಬೇಕಾದ ದಿಕ್ಕಿಗೆ ಚಲಿಸಲು ಅನುಕೂಲವಾಯಿತು. ಬ್ಯಾಥಿಸ್ಕೇಫಿನ ತಳಭಾಗಕ್ಕೆ ಜೋಡಿಸಿದ ಗೋಳದೊಳಗಿಂದ ಸಮುದ್ರ ಗರ್ಭದ ವೀಕ್ಷಣೆ ನಡೆಸಬಹುದಾಗಿತ್ತು. 1960 ಜನವರಿಯಲ್ಲಿ ಟ್ರೀಸ್ಟ್ ಎಂಬ ಬ್ಯಾಥಿಸ್ಕೇಫ್ ಪೆಸಿಫಿಕ್ ಸಾಗರದ ಚಾಲೆಂಜರ್ ಡೀಪ್ ಪ್ರದೇಶದಲ್ಲಿ 10910 ಮೀಟರ್ ಆಳಕ್ಕೆ ಇಳಿದು ದಾಖಲೆ ಸ್ಥಾಪಿಸಿತು.
(ಎ.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ